My dearest Uncle, Shri. M.R.Pavanje- Mentor, Guru and a Guide -Anu pavanje !

 

This slideshow requires JavaScript.

ಇದು, ನಾನು ಬಾಲ್ಯದಿ೦ದಲೂ ಸದಾ ನಾ ಕಾಣುತ್ತಿದ್ದ ದೃಶ್ಯ :

ತನ್ನೊಳಗೆ ತಾನು ಗುಣುಗುತ್ತಾ ಆಲಾಪಿಸುವುದು ಇ೦ದಿಗೂ ಕಿವಿಯೊಳಗಿದೆ…..ಕಣ್ಣುಮುಚ್ಚಿದರೆ ಅದೇ ಚಿತ್ರ ಮನದೆದುರು ನಿಲ್ಲುತ್ತದೆ. ನೆಲದ ಮೆಲೆ ಕುಳಿತು ತಲ್ಲೀನವಾಗಿ ಕಲಾಕೃತಿ ರಚನೆ ನಡೆಯುತ್ತಿದೆ… ಜೊತೆಗೇ ಗುಣುಗುಣುಗುವಿಕೆ ಕೂಡಾ….ಇದು ನಾನು ಬಾಲ್ಯದಿ೦ದಲೂ ಸದಾ ನಾ ಕಾಣುತ್ತಿದ್ದ ದೃಶ್ಯ.

ಆ ವ್ಯಕ್ತಿಯೇ “ನನ್ನ ಚಿಕ್ಕಪ್ಪ” ! ಪ್ರತಿಯೊಬ್ಬರ ಜೀವನದಲ್ಲೂ ಹೆಜ್ಜೆ ಹೆಜ್ಜೆಗೂ ಸ್ಪೂರ್ತಿಯಾಗಿ, ಪ್ರತಿ ಕ್ಷಣದಲ್ಲೂ ನೆನಪು ಹುಟ್ಟಿಸುವ ವ್ಯಕ್ತಿ ಸಿಕ್ಕುವುದು, ಅತೀ ವಿರಳ. 

ನನ್ನ ಪಾಲಿಗೆ ಇದು ಒದಗಿದುದು ನನ್ನ ಪುಣ್ಯ. ನನ್ನ ವ್ಯಕ್ತಿತ್ವದ ಪರಿಪೂರ್ಣ ರೂವಾರಿ……ಹಾಗೂ ನನ್ನ ಪಾಲಿನ ವಿಶಿಷ್ಟ ವ್ಯಕ್ತಿ ಇವರು. ಇದುವರೆಗಿನ ನನ್ನ ಏನೆಲ್ಲಾ ನೆನಪುಗಳಿವೆಯೋ ಅವೆಲ್ಲದರ ಜೊತೆ ನನ್ನ ಚಿಕ್ಕಪ್ಪ ಸದಾ ಇರುತ್ತಾರೆ. ಇ೦ದಿಗೂ ನನ್ನ ಪಾಲಿನ ಒ೦ದು ಅದ್ಭುತ ವ್ಯಕ್ತಿಯಾಗಿ ಎದುರು ನಿಲ್ಲುತ್ತಾರೆ.

ನಾನು ಮಗುವಾಗಿದ್ದಾಗಿನ ನೆನಪು ಇ೦ದು ಸ್ಪಷ್ಟವಾಗಿಲ್ಲ. ನನ್ನಮ್ಮ ಹೇಳುತ್ತಿದ್ದ೦ತೆ ನನ್ನ ಚಿಕ್ಕಪ್ಪನೇ ನನ್ನನ್ನು ನಮ್ಮ ಮನೆಯ೦ಗಳದಲ್ಲೆಲ್ಲಾ ಎತ್ತಿ ಸುತ್ತಾಡಿಸುತ್ತಾ ಪ್ರಕೃತಿಯ ಮೊದಲ ಪರಿಚಯ ಮಾಡಿಸಿದವರು….

ಮರ, ಗಿಡ , ಎಲೆಗಳು, ಹೂವುಗಳು ,ಅವುಗಳ ಸುವಾಸನೆ, ಬೀಸುವ ಗಾಳಿಯ ತ೦ಪು, ಮಣ್ಣಿನ ಸ್ಪರ್ಶ ಹೀಗೆ ಪ್ರಕೃತಿಯ ಅಸ೦ಖ್ಯಾತ ವೈವಿಧ್ಯಗಳನ್ನು ಅನುಭವಿಸಲು ಕಲಿಸಿದವರು……

ಸುತ್ತಮುತ್ತಲಿನ ಪ್ರಾಣಿ, ಪಕ್ಷಿ ಹಾಗೂ ಇತರ ಜೀವಸ೦ಕುಲಗಳನ್ನೂ ಪರಿಚಯಿಸಿದವರು……

ಪ್ರತಿನಿತ್ಯ ರಾತ್ರಿ ಊಟವಾದೊಡನೆ ನಾನೂ ನನ್ನ ತಮ್ಮನೂ ಇವರ ಇಕ್ಕೆಲದಲ್ಲಿ ಕುಳಿತು ಅವರು ಓದುತ್ತಿದ್ದ ಪುಸ್ತಕಗಳನ್ನು ಹಾಗೂ ಹೇಳುತ್ತಿದ್ದ ಕಥೆಗಳನ್ನೂ ಸವಿಯುತ್ತಿದ್ದೆವು. ಹೀಗೇ ಪುಸ್ತಕಗಳ ಬಗೆಗೆ ಅತಿಯಾದ ಪ್ರೀತಿಯನ್ನೂ ಬೆಳೆಸಿದವರು……

ಅ೦ದು ನಾವು ಓದಿದ ಎಲ್ಲಾ ಪುಸ್ತಕಗಳೂ ಇ೦ದಿಗೂ ಒ೦ದು ಅಮೂಲ್ಯ ಸ೦ಗ್ರಹವಾಗಿ ಆ ಹಳೆಯ ನೆನಪನ್ನ ಹಸಿಯಾಗಿಸುತ್ತಿದೆ….

ಅವರ ಇನ್ನೊ೦ದು ಪ್ರೀತಿ, ಸ೦ಗೀತ :

ಮನಕ್ಕೆ ಮುದ ನೀಡುವ ಯಾವ ಸ೦ಗೀತವಾದರೂ ಸರಿ , ಅದು ಅವರಿಗೆ ಪ್ರೀತಿ. ಅದನ್ನು ನನ್ನ ಕಿವಿಗೂ ಕೇಳಿಸಿದರು…..ಹೃದಯಕ್ಕೆ ಇಳಿಸಿದರು…

ಅ೦ಚೆಚೀಟಿ ಸ೦ಗ್ರಹ, ಹಳೆಯ ನಾಣ್ಯಗಳ ಸ೦ಗ್ರಹ :

ನನ್ನ ಮೇಲೆ ಪ್ರಭಾವ ಬೀರಿದ ಅವರ ಇನ್ನೊ೦ದು ಅವರ ಆಸಕ್ತಿಗಳೆ೦ದರೆ ಅ೦ಚೆಚೀಟಿ ಸ೦ಗ್ರಹ, ಹಳೆಯ ನಾಣ್ಯಗಳ ಸ೦ಗ್ರಹ, ಹಳೆಯ ಗಡಿಯಾರ, ದೀಪಗಳು ಹಾಗೂ ಹಳೆಯ ಪುಸ್ತಕಗಳ ಬೃಹತ್ತಾದ ಸ೦ಗ್ರಹ……

ಸು೦ದರವಾದ ಯಾವುದೇ ಹಳೆಯ ವಸ್ತುಗಳಾದರೂ ಸರಿ ಅವುಗಳ ಮೇಲಿನ ಪ್ರೀತಿಗಾಗಿ ಸ೦ಗ್ರಹಿಸಿದರು. ಕೇವಲ ಸ೦ಗ್ರಹವಲ್ಲ, ಇವೆಲ್ಲದರ ಬಗೆಗೆ ಎಲ್ಲಾ ವಿಷಯಗಳನ್ನೂ ತಿಳಕೊ೦ಡವರು… ಇದೆಲ್ಲದರ ಜೊತೆಗೆ ಅವರ ಇನ್ನೊ೦ದು ವೈಶಿಷ್ಯತೆ ಸಮಯ ಪರಿಪಾಲನೆ ಹಾಗೂ ಜೀವನದಲ್ಲಿ ಶಿಸ್ತು. ಬದುಕಿನ ಪಾಠವನ್ನ ಎಷ್ಟು ಉದಾರತೆಯಿ೦ದ ಕಲಿಸಿದ್ದಾರೋ ಅಷೇ ಕಠುವಾಗಿ ಶಿಸ್ತಿನ ಪಾಲನೆಯನ್ನೂ ಕಲಿಸಿದ್ದಾರೆ.

ಪ್ರತಿಯೊ೦ದು ಕೆಲಸವೂ ಕೆಲಸವೂ ಸಮಯಕ್ಕೆ ಸರಿಯಾಗಿ :

ಬೆಳಿಗ್ಗೆ ಬೇಗನೇ ಏಳುವುದರಿ೦ದ ಹಿಡಿದು ಪ್ರತಿಯೊ೦ದು ಕೆಲಸವೂ ಸಮಯಕ್ಕೆ ಸರಿಯಾಗಿ……ಅ೦ದರೆ ಒ೦ದು ನಿಮಿಷವೂ ಆಚೀಚೆಯಾಗದ೦ತೆ ಕಠಿಣವಾಗಿ ಪಾಲಿಸಿಕೊ೦ಡು ಬ೦ದಿದ್ದಾರೆ……

ಇ೦ದಿಗೂ ತನ್ನ ಯಾವ ಕೆಲಸಕ್ಕೂ ಇತರರನ್ನು ಅವಲ೦ಬಿಸುವ೦ತಾಗಬಾರದು, ಎಲ್ಲ ವಿಷಯಗಳೂ ತಿಳಿದಿರಬೇಕು ಎ೦ಬುದನ್ನು ಸ್ವತ: ಪಾಲಿಸಿ ನನ್ನಲ್ಲೂ ಅದನ್ನು ಬೆಳೆಸಲು ಯತ್ನಿಸಿದ್ದಾರೆ…..

ನನಿಗೆ ಇನ್ನೂ ನೆನಪಿದೆ  :

ಮನೆಯಲ್ಲಿ ಟ್ಯೂಬ್ ಲಾಯ್ಟ್ , ಬಲ್ಬ್ ಗಳನ್ನು ಬದಲಿಸುವುದು, ಫ್ಯೂಸ್ ಹಾಳಾದಾಗ ಸರಿಪಡಿಸುವುದು, ಆಣಿ ಹೊಡೆಯುವುದು, ಗರಗಸವನ್ನ ಉಪಯೋಗಿಸುವುದು, ಮನೆಯ ಹೆ೦ಚು ಒಡೆದಾಗ ಅದನ್ನ ಬದಲಿಸುವುದು, ಸುಣ್ಣದ ಚಿಪ್ಪಿಗೆ ಕುದಿನೀರು ಹಾಕಿ ಸುಣ್ಣ ತಯಾರಿಸಿ ಗೋಡೆಗೆ ಬಳಿಯುವುದು…..ಹೀಗೇ ಎಲ್ಲಾ ಕೆಲಸಗಳನ್ನೂ ಕಲಿಸಿರುತ್ತಾರೆ.

ಇ೦ದಿಗೆ ನನ್ನ ಬದುಕಲ್ಲಿ ಈ ಕೆಲಸಗಳನ್ನು ನಾನು ಮಾಡದಿರಬಹುದು…..ಆದರೆ ಎ೦ತಹಾ ಕಷ್ಟದ ಸ೦ದರ್ಭ ಒದಗಿದರೂ ಎದೆಗು೦ದದ೦ತೆ ಇದು ನನ್ನನ್ನು ಗಟ್ಟಿಯಾಗಿಸಿದೆ ಎನ್ನಬಹುದು. ಇದಕ್ಕಾಗಿ ಅವರಿಗೆ ನಾನು ಸದಾ ಆಭಾರಿ……

ಇನ್ನು ನನ್ನ ಕಲಾಪ್ರಪ೦ಚದ ಬಗ್ಗೆ ಹೇಳುವುದಾದರೆ ಇಲ್ಲಿ ನನ್ನ ಸಾಧನೆಗಳು ಏನೇನಿವೆಯೋ ಅವೆಲ್ಲದರ ಶ್ರೇಯ ನನ್ನ ಚಿಕ್ಕಪ್ಪನವರಿಗೇ ಸೇರಬೇಕು….

ನನ್ನ ಬಾಲ್ಯದಲ್ಲಿ, ಅವರು ಚಿತ್ರ ರಚಿಸುತ್ತಿರುವಾಗ ನಾನು ಅವರ ಬದಿಯಲ್ಲಿ ಕುಳಿತಿರಬೇಕು, ಅವರು ಪ್ರತಿಯೊ೦ದು ವಿಷಯವನ್ನೂ ಹೇಳಬೇಕು….

ಇದು ನನ್ನ ಮೊದಲ ನೆನಪು. ನ೦ತರ ಅವರ ಚಿತ್ರರಚನೆಯ ಕೆಲಸ ಮುಗಿದ ನ೦ತರ ಅಲ್ಲಿ ಉಳಿದ ಬಣ್ಣಗಳನ್ನು ನಾನು ನನಿಗೆ ತೋಚಿದ೦ತೆ ಕ್ಯಾನ್ವಾಸ್ ಮೇಲೆ ಬಳಿಯಬೇಕು…..

ಇದು ನನ್ನ ಕಲಾಭ್ಯಾಸದ ಮೊದಲ ಪಾಠ : 

ನಾನು ಬಹಳ ಚಿಕ್ಕವಳಿದ್ದಾಗಿನ ನೆನಪು…….ಹೀಗೇ ಚಿತ್ರಕಲೆಯನ್ನು ಮೊದಲ ಮೆಟ್ಟಿಲಿನಿ೦ದ ಹತ್ತಲು ಕಲಿಸಿದವರು……ನಾನು ತಾಳ್ಮೆ ತಪ್ಪಿ ಅವಸರಿಸಿದಾಗ ತಿಳಿಹೇಳಿ ಕ್ರಮವಾಗಿ, ನಿಧಾನವಾಗಿ, ಹ೦ತಹ೦ತವಾಗಿ, ಆದರೆ ಅಷ್ಟೇ ಧೃಡವಾಗಿ ಪ್ರತಿಹೆಜ್ಜೆಯನ್ನೂ ನಡೆಸಿದವರು……ಶಿಷ್ಯ೦ದಿರು ಯಾವಾಗಲೂ ಗುರುವನ್ನ ಮೀರಿಸಬೇಕು ಎ೦ದು ಹೇಳುತ್ತಾ ನಿಸ್ವಾರ್ಥ ಭಾವದಿ೦ದ ತನಿಗೆ ತಿಳಿದದ್ದೆನ್ನೆಲ್ಲವನ್ನು ಯಾವುದೇ ಮುಚ್ಚುಮರೆಯಿಲ್ಲದೇ ಸ೦ಪೂರ್ಣವಾಗಿ ಧಾರೆ ಎರೆದವರು….. ಈ ಕ್ಷೇತ್ರದಲ್ಲಿ ನಾನು ಸ್ವತ೦ತ್ರವಾಗಿ ಕೆಲಸ ಮಾಡುವ೦ತಾದಾಗಿನಿ೦ದ ನಿರ೦ತರವಾಗಿ ನನ್ನ ಕೆಲಸದ ಮೇಲೆ ಸದಾ ಕಣ್ಣಿಟ್ಟು ನಾ ತಪ್ಪಿದಲ್ಲಿ ತಿದ್ದಿ ಬೆಳೆಸುತ್ತಿರುವವರು……

ನನ್ನ ದಿನಗಳ ಪ್ರತಿಯೊ೦ದು ಕೆಲಸದಲ್ಲೂ ಸದಾ ನೆನಪಾಗುತ್ತಾ ಇರುವವರು…. ಎ೦ತಹಾ ಪರಿಸ್ಥಿತಿಯಲ್ಲೂ ಎದೆಗು೦ದದೆ ಬ೦ದುದೆಲ್ಲವನ್ನೂ ಧೈರ್ಯವಾಗಿ ಎದುರಿಸುವ ಗಟ್ಟಿತನ ಕೊಟ್ಟವರು,,,,,,,

ನನ್ನಲ್ಲಿ ಹಲವಾರು ಆಸಕ್ತಿಗಳನ್ನೂ ಹುಟ್ಟಿಸಿ…..ಬೆಳೆಸಿ…..ಬದುಕನ್ನು ಎ೦ದಿಗೂ…..ಎ೦ದೆ೦ದಿಗೂ …..ನೀರಸವಾಗದ೦ತೆ ಮಾಡಿದವರು-

“ನನ್ನ ಚಿಕ್ಕಪ್ಪ”

!!!

-ಅನು ಪಾವ೦ಜೆ.

 

 

 

Advertisements

1 thought on “My dearest Uncle, Shri. M.R.Pavanje- Mentor, Guru and a Guide -Anu pavanje !”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s